ಎಂಡರ್ಸ್, ಜಾನ್ ಫ್ರಾಂಕ್ಲಿನ್

	ಅಮೆರಿಕದ ಖ್ಯಾತ ಸೂಕ್ಷ್ಮಜೀವಿಶಾಸ್ತ್ರಜ್ಞ (ಮೈಕ್ರೊಬಯಾಲಜಿಸ್ಟ್). ಹಾರ್ವರ್ಡ್ ವಿಶ್ವವಿದ್ಯಾನಿಲಯದ ಮೆಡಿಕಲ್ ಸ್ಕೂಲಿನಲ್ಲಿ ಬ್ಯಾಕ್ಟೀರಿಯಾಲಜಿ ಮತ್ತು ಸೋಂಕುರಕ್ಷಾಶಾಸ್ತ್ರದ (ಇಮ್ಯುನಾಲಜಿ) ಪ್ರಾಧ್ಯಾಪಕ. ಊತಕಕೃಷಿಯಲ್ಲಿ (ಟಿಶ್ಯು ಕಲ್ಚರ್) ಬಹು ಪರಿಣಾಮಕಾರಿಯಾದ ನೂತನ ವಿಧಾನಗಳನ್ನು ಕಂಡುಹಿಡಿದು ಅದರ ಸಹಾಯದಿಂದ ಪೋಲಿಯೊ ವೈರಸ್ಸಿನ ಅಧ್ಯಯನಕ್ಕೆ ಅನುಕೂಲ ಮಾಡಿಕೊಟ್ಟ. ಇದು ಮುಂದೆ ಅವನ ದೇಶೀಯನಾದ ಸಾಕ್‍ನಿಗೆ ಪೋಲಿಯೊ ನಿರೋಧಕ ವ್ಯಾಕ್ಸೀನನ್ನು ತಯಾರಿಸಲು ದಾರಿ ಮಾಡಿಕೊಟ್ಟಿತು. ವೈರಸ್ ಕೃಷಿವಿಧಾನಗಳ ಬಗ್ಗೆ ಎಂಡರ್ಸ್ ನಡೆಸಿದ ಸಂಶೋಧನೆಗಾಗಿ ಅವನಿಗೂ ಅವನ ಪ್ರಧಾನ ಸಹಸಂಶೋಧಕರಾದ ಥಾಮಸ್ ಎಚ್. ವೆಲರ್ ಮತ್ತು ಫ್ರೆಡರಿಕ್ ಸಿ. ರಾಬಿನ್ಸ್ ಅವರಿಗೂ 1954ರಲ್ಲಿ ವೈದ್ಯ ವಿe್ಞÁನದ ನೊಬೆಲ್ ಬಹುಮಾನವನ್ನು ನೀಡಲಾಯಿತು.

	ಎಂಡರ್ಸ್ ಹುಟ್ಟಿದ್ದು 1897ರ ಫೆಬ್ರವರಿ 10ರಂದು. ಕನೆಕ್ಟಿಕಟ್ ಪ್ರಾಂತ್ಯದ ವೆಸ್ಟ್ ಹಾರ್ಟ್‍ಫರ್ಡ್ ಎಂಬಲ್ಲಿ. ಯೇಲ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಮೊದಲ ಮಹಾಯುದ್ಧ ಪ್ರಾರಂಭವಾಯಿತು. ಹೀಗಾಗಿ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ನಿಲ್ಲಿಸಿ ಸೈನಿಕ ಸೇವೆಗೆ ಸೇರಬೇಕಾಯಿತು. ಇದರಿಂದ ವಿಶ್ವವಿದ್ಯಾನಿಲಯದ ಪದವಿ ಪಡೆಯುವುದು ತಡವಾಯಿತು. ನಂತರ ವ್ಯಾಸಂಗವನ್ನು ಮುಂದುವರಿಸಿದ್ದು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ. ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಸಂಶೋಧನ ಪದವಿಗಾಗಿ ವ್ಯಾಸಂಗ ಮಾಡುತ್ತಿದ್ದ ಎಂಡರ್ಸ್ ಕೊನೆಯ ಗಳಿಗೆಯಲ್ಲಿ ಕೆಲವು ಸ್ನೇಹಿತರಿಂದ ಪ್ರಭಾವಿತನಾಗಿ ವೈದ್ಯಕೀಯ ವ್ಯಾಸಂಗ ಕೈಗೊಂಡ. ಕೊನೆಗೆ 1930ರಲ್ಲಿ ಬ್ಯಾಕ್ಟೀರಿಯಾಲಜಿ ವಿಭಾಗದಲ್ಲಿ ಸಂಶೋಧನ ಪದವಿಗಳಿಸಿದ. ಅಂದಿನಿಂದ ಅದೇ ವಿಶ್ವವಿದ್ಯಾನಿಲಯದ ವೈದ್ಯಶಾಲೆಯಲ್ಲಿ ಸೇವೆ ಸಲ್ಲಿಸಿದ.

	ಪೌಷ್ಟಿಕಾಂಶಗಳಿರುವ ದ್ರಾವಣವನ್ನು ಉಪಯೋಗಿಸಿ ಬ್ಯಾಕ್ಟೀರಿಯಗಳನ್ನು ಗಾಜಿನ ತಟ್ಟೆಗಳಲ್ಲಿ ಬೆಳೆಸಬಹುದು. ಆದರೆ ವೈರಸ್‍ಗಳನ್ನು ಹಾಗೆ ಬೆಳೆಸುವುದು ಸಾಧ್ಯವಿಲ್ಲ. ಅವು ವೃದ್ಧಿಯಾಗುವುದು ಸಜೀವಗಳ ದೇಹದಲ್ಲಿ ಮಾತ್ರ. ಆದರೆ ಫಲಿತವಾದ (ಫರ್ಟಿಲೈಸ್ಡ್) ಕೋಳಿ ಮೊಟ್ಟೆಯ ಚಿಪ್ಪಿನಲ್ಲಿ ಒಂದು ರಂಧ್ರ ಮಾಡಿ ಒಳಗಿರುವ ಕೋಳಿಯ ಭ್ರೂಣವನ್ನು ಉಪಯೋಗಿಸಿಕೊಂಡು ಅದರಲ್ಲಿ ವೈರಸುಗಳನ್ನು ಬೆಳೆಸಬಹುದು.

	ವೈರಸುಗಳನ್ನು ಬೆಳೆಸಲು ಬೇಕಾದ ಜೀವಂತ ಜೀವಕೋಶಗಳು ಒಟ್ಟು ಜೀವಿಯ ಅಥವಾ ಭ್ರೂಣದ ಭಾಗವಾಗಿರಬೇಕಿಲ್ಲ, ಒಂದು ಪೂರ್ಣ ಅಂಗದ ಭಾಗವಾಗಿಯೂ ಇರಬೇಕಾದ್ದಿಲ್ಲವೆಂದು ಎಂಡರ್ಸ್ ಮನಗಂಡ. ಕೋಳಿಯ ಭ್ರೂಣವನ್ನು ಅರೆದು ರಕ್ತದಲ್ಲಿ ತೇಲಿಬಿಟ್ಟು ಅದರಲ್ಲಿ ಗದ್ದಬಾವು (ಮಂಪ್ಸ್) ವೈರಸನ್ನು ಬೆಳೆಸುವುದರಲ್ಲಿ ಎಂಡರ್ಸ್, ವೆಲರ್ ಮತ್ತು ರಾಬಿನ್ಸ್ ಯಶಸ್ಸುಗಳಿಸಿದರು. ಹಿಂದೆ ಇದೇ ಪ್ರಯತ್ನ ಮಾಡಿದವರು ಯಶಸ್ವಿಯಾಗಿರಲಿಲ್ಲ. ಏಕೆಂದರೆ ಅದರಲ್ಲಿ ಬ್ಯಾಕ್ಟೀರಿಯಾಗಳೂ ಬೆಳೆದು ತೊಂದರೆ ಉಂಟುಮಾಡುತ್ತಿದ್ದುವು. ಎಂಡರ್ಸ್ ಮಾಡಿದ ಉಪಾಯವೆಂದರೆ, ಅದಕ್ಕೆ ಸ್ವಲ್ಪ ಪೆನಿಸಿಲಿನ್ ಬೆರೆಸಿದ್ದು, ಪೆನಿಸಿಲಿನ್ ಬ್ಯಾಕ್ಟೀರಿಯಗಳನ್ನು ನಾಶಮಾಡಿ ವೈರಸುಗಳ ವೃದ್ಧಿಗೆ ಅವಕಾಶ ಮಾಡಿಕೊಡುವುದೆಂದು ಎಂಡರ್ಸ್ ತೋರಿಸಿಕೊಟ್ಟ.

	ತರುವಾಯ ಎಂಡರ್ಸ್ ತಂಡದವರು ಪೋಲಿಯೊಮಯೆಲಿಟಿಸ್ ವೈರಸ್ ಕಡೆ ಗಮನ ಹರಿಸಿದರು. ಪೋಲಿಯೊ ವೈರಸ್ ಜೀವಂತ ಕೋತಿ ಮತ್ತು ಮನುಷ್ಯರ ನರಗಳ ಅಂಗಾಂಶಗಳಲ್ಲಿ ಮಾತ್ರ ಬೆಳೆಯುವುದೆಂದು ತಿಳಿದಿತ್ತು. ಈ ತಂಡದವರು ಸತ್ತುಹುಟ್ಟಿದ (ಸ್ಟಿಲ್‍ಬಾರ್ನ್) ಶಿಶುವಿನ ಅಂಗಾಂಶವನ್ನು ಪಡೆದು ಅದಕ್ಕೆ ಪ್ರತಿಜೈವಿಕವನ್ನು (ಆಂಟಿಬಯೊಟಿಕ್) ಬೆರೆಸಿ ಅದರಲ್ಲಿ ಪೋಲಿಯೊ ವೈರಸನ್ನು ಬೆಳೆಸಿದರು (1949). ತರುವಾಯ ಇತರ ಬಗೆಯ ಅಂಗಾಂಶಗಳಲ್ಲೂ ಆ ವೈರಸನ್ನು ಬೆಳೆಸಿದರು. ಇಷ್ಟಾದಮೇಲೆ ಪೋಲಿಯೊ ವೈರಸನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆಸಿ ಅದನ್ನು ಅಧ್ಯಯನ ಮಾಡಿ ಪೋಲಿಯೊ ನಿರೋಧಕ ವ್ಯಾಕ್ಸೀನ್ ತಯಾರಿಸುವುದು ಸಾಕ್‍ಗೆ ಸಾಧ್ಯವಾಯಿತು.								
(ಜೆ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ